ಬಾರ್ಡರ್ ಗವಾಸ್ಕರ್ ಟ್ರೋಫಿಯ (Border Gavaskar Trophy) 4ನೇ ಪಂದ್ಯದಲ್ಲಿ ಭಾರತ ತಂಡ 184 ರನ್ಗಳ ಹೀನಾಯ ಸೋಲು ಕಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (World Test Championship) ನಿರ್ಧರಿಸುವ ಪಂದ್ಯದಲ್ಲಿ ಟೀಮ್ ಇಂಡಿಯಾ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರಿ ಸೋಲು ಕಂಡಿದೆ. ಆಸೀಸ್ ನೀಡಿದ್ದ 340 ರನ್ಗಳ ಗುರಿಯನ್ನ ಬೆನ್ನಟ್ಟಿದ ರೋಹಿತ್ ಪಡೆ 155ಕ್ಕೆ ಆಲೌಟ್ ಆಗುವ ಮೂಲಕ 4ನೇ ಟೆಸ್ಟ್ ಪಂದ್ಯದಲ್ಲಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಭಾರತ ಸರಣಿಯಲ್ಲಿ 1-2ರಲ್ಲಿ ಹಿನ್ನಡೆ ಅನುಭವಿಸಿದೆ. ಅಲ್ಲದೆ ವಿಶ್ವಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ನೇರವಾಗಿ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ.
ಕೈಕೊಟ್ಟ ಹಿರಿಯ ಆಟಗಾರರು
340 ರನ್ಗಳ ಕಠಿಣ ಗುರಿ ಪಡೆದ ಭಾರತ ತಂಡಕ್ಕೆ ನಿರೀಕ್ಷಿತ ಆರಂಭ ದೊರೆಕಿಸಿಕೊಡುವಲ್ಲಿ ಸೀನಿಯರ್ ಆಟಗಾರರು ವಿಫಲರಾದರು. ರೋಹಿತ್ ಶರ್ಮಾ ಕೇವಲ 9 ರನ್ಗಳಿಸಿ ಬೇಜವಾಬ್ದಾರಿ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರೆ, ರಾಹುಲ್ 5 ಎಸೆತಗಳನ್ನೆದುರಿಸಿ ಡಕ್ ಔಟ್ ಆದರು. ನಂತರ ಬಂದ ವಿರಾಟ್ ಕೊಹ್ಲಿ ಕೇವಲ 5 ರನ್ಗಳಿಸಿ ಎಂದಿನಂತರ ವಿಕೆಟ್ನಿಂದ ಹೊರ ಹೋಗುವ ಚೆಂಡನ್ನ ಆಡುವ ಯತ್ನದಲ್ಲಿ ಸ್ಲಿಪ್ಗೆ ಕ್ಯಾಚ್ ನೀಡಿದರು.
ಕೇವಲ 33ರನ್ಗಳಾಗುವಷ್ಟರಲ್ಲಿ ಭಾರತ 3 ವಿಕೆಟ್ ಕಳೆದುಕೊಂಡಿತು. ಈ ಮೂರು ವಿಕೆಟ್ ನಂತರ ಟೀಮ್ ಇಂಡಿಯಾ ಪಂದ್ಯ ಗೆಲುವಿನ ಆಸೆ ಕೈಬಿಟ್ಟು ಡ್ರಾ ಮಾಡಿಕೊಳ್ಳುವುದಕ್ಕೆ ಮುಂದಾಯಿತು. ಹಿಂದೆಲ್ಲಾ ಹೊಡಿಬಡಿ ಆಟವಾಡುತ್ತಿದ್ದ ಪಂತ್ ಡಿಫೆನ್ಸ್ ಆಟಕ್ಕೆ ಮೊರೆ ಹೋದರು. ಅವರು ಯಶಸ್ವಿ ಜೈಸ್ವಾಲ್ ಜೊತೆಗೂಡಿ 32. 3 ಓವರ್ಗಳ ಕಾಲ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಇರುವವರೆಗೆ ಭಾರತ ಸುಲಭವಾಗಿ ಡ್ರಾ ಮಾಡಿಕೊಳ್ಳುತ್ತದೆ ಎಂದೇ ಭಾವಿಸಲಾಗಿತ್ತು.
ಪಂತ್ ಔಟ್ ಆಗುತ್ತಿದ್ದಂತೆ ಭಾರತದ ಪತನ
ಆದರೆ 104 ಎಸೆತಗಳನ್ನು ಸಮಾಧಾನವಾಗಿ ಎದುರಿಸಿದ್ದ ಪಂತ್ ಪಾರ್ಟ್ ಟೈಮ್ ಬೌಲರ್ ಟ್ರಾವಿಸ್ ಹೆಡ್ ಬೌಲಿಂಗ್ನಲ್ಲಿ ದುಡುಕಿನ ಆಟವಾಡಿ ಬಿಗ್ ಶಾಟ್ ಮಾಡುವ ಯತ್ನದಲ್ಲಿ ಮಿಚೆಲ್ ಮಾರ್ಷ್ ಹಿಡಿದ ಅದ್ಭುತ ಕ್ಯಾಚ್ಗೆ ಬಲಿಯಾದರು. ಪಂತ್ ವಿಕೆಟ್ ಬೀಳುತ್ತಿದ್ದಂತೆ ಭಾರತದ ಡ್ರಾ ಮಾಡಿಕೊಳ್ಳುವ ಯತ್ನಕ್ಕೂ ದೊಡ್ಡ ಹೊಡೆತ ಬಿತ್ತು. ಇಡೀ ಪಂದ್ಯ ಸಂಪೂರ್ಣ ಆಸ್ಟ್ರೇಲಿಯಾ ಪರ ತಿರುಗಿತು.
ನಂತರ ಬಂದಂತಹ ಜಡೇಜಾ 14 ಎಸೆತಗಳಲ್ಲಿ 2, ಮೊದಲ ಇನ್ನಿಂಗ್ಸ್ನಲ್ಲಿ ಶತಕ ಸಿಡಿಸಿದ್ ನಿತೀಶ್ ಕುಮಾರ್ ರೆಡ್ಡಿ ಕೇವಲ 5 ಎಸೆತಗಳಲ್ಕಿ 1 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಆಕಾಶ್ ದೀಪ್ 17 ಎಸೆತಗಳಲ್ಲಿ 7, ಜಸ್ಪ್ರೀತ್ ಬುಮ್ರಾ 8 ಮತ್ತು ಮೊಹಮ್ಮದ್ ಸಿರಾಜ್ 2 ಎಸೆತಗಳಲ್ಲಿ ಡಕ್ ಔಟ್ ಆದರು. ವಾಷಿಂಗ್ಟನ್ ಸುಂದರ್ 45 ಎಸೆತಗಳನ್ನ ಎದುರಿಸಿ ಡ್ರಾ ಮಾಡಲು ಯತ್ನಿಸಿದರಾದರು, ಅವರ ಪ್ರಯತ್ನಕ್ಕೆ ಸೂಕ್ತ ಬೆಂಬಲ ಸಿಗದೇ ಭಾರತ 79.1 ಓವರ್ಗಳಲ್ಲಿ ಆಲೌಟ್ ಆಯಿತು. ಭಾರತ ತಂಡ ಇನ್ನು 13 ಓವರ್ ಆಡಿದ್ದರೆ ಪಂದ್ಯವನ್ನ ಡ್ರಾ ಸಾಧಿಸಬಹುದಿತ್ತು.