ತೃತೀಯ ಲಿಂಗಿಗಳು (Transgender) ಎಂದರೆ ಸಮಾಜ ನೋಡುವ ದೃಷ್ಟಿಕೋನವೇ ಬೇರೆ. ಸಮಾಜ (Society) ಅಷ್ಟೇ ಯಾಕೆ? ಹೆತ್ತವರು ಕೂಡ ಅವರನ್ನು ಮನೆಯಿಂದ ಹೊರ ಹಾಕಿದ ನಿದರ್ಶನಗಳೂ ಇವೆ. ಆದರೆ ಇಲ್ಲೊಬ್ಬ ಟ್ರಾನ್ಸ್ಜೆಂಟರ್ ಎಲ್ಲ ಸವಾಲು-ಸಂಕಷ್ಟಗಳನ್ನು ಮೆಟ್ಟಿ ನಿಂತು ಪ್ರಾಧ್ಯಾಪಕಿ (Guest Lecturer) ಆಗಿದ್ದಾರೆ.
ಹೌದು, ಇವರು ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದ ರೇಣುಕಾ ಪೂಜಾರಿ. ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವಾರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕಳೆದ ಐದು ದಿನಗಳ ಹಿಂದೆಯಷ್ಟೇ ಅರೆಕಾಲಿಕ ಕನ್ನಡ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ
ರಾಜ್ಯದಲ್ಲಿ ಇದೇ ಮೊದಲು
ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಕಿ ಆಗಿದ್ದಾರೆ. ಕುರುಗೋಡು ಪಟ್ಟಣದ ಕೃಷಿಕರಾದ ಮಲ್ಲಯ್ಯ ಮತ್ತು ತಿಪ್ಪಮ್ಮ ಎನ್ನುವವರ ಪುತ್ರಿಯಾದ ರೇಣುಕಾ, ಹುಟ್ಟೂರಲ್ಲೇ ಪ್ರೌಢಶಾಲೆ ವ್ಯಾಸಂಗ ಮುಗಿಸಿದ್ದಾರೆ.
ಬಳ್ಳಾರಿಯ ಮುನ್ಸಿಪಲ್ ಕಾಲೇಜಿನಲ್ಲಿ ಪಿಯು ಮುಗಿಸಿ, ಸರಕಾರಿ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆಯುವ ರೇಣುಕಾ ಪೂಜಾರಿಗೆ, ತನ್ನ ದೇಹದಲ್ಲಿ ಆಗುತ್ತಿರುವ ಬದಲಾವಣೆ ಬಗ್ಗೆ ಅರಿವು ಬಂದಿದೆ. ಆ ಬಳಿಕ ಎದುರಾದ ಎಲ್ಲಾ ಸವಾಲು ಮೆಟ್ಟಿ ನಿಂತು ಎಂಎ ಕನ್ನಡ ಮುಗಿಸಿ ಈಗ ಅರೆಕಾಲಿಕ ಪ್ರಾಧ್ಯಾಪಕರಾಗಿ ನೇಮಕಗೊಂಡಿದ್ದಾರೆ.
ಸಂತಸ ವ್ಯಕ್ತಪಡಿಸಿದ ರೇಣುಕಾ
ಈ ಬಗ್ಗೆ ನ್ಯೂಸ್18 ನೊಂದಿಗೆ ಮಾತನಾಡಿದ ಅತಿಥಿ ಉಪನ್ಯಾಸಕಿ ರೇಣುಕಾ ಪೂಜಾರಿ, ಎಷ್ಟೋ ಏಳು ಬೀಳು ಕಂಡು ಈಗ ಈ ಸ್ಥಾನಕ್ಕೆ ಬಂದಿರೋದು ಖುಷಿ ಎನಿಸುತ್ತಿದೆ. ಬಿದ್ದು ಎದ್ದಾಗ ಸಂತಸ ಆಗುತ್ತೆ, ಯೂನಿವರ್ಸಿಟಿ ಕೈ ಹಿಡಿದು ಮೇಲಕ್ಕೆ ಎತ್ತಿದೆ. 2022ರಲ್ಲಿ ಎಂಎ ಪದವಿ ಮುಕ್ತಾಯ ಆಯ್ತು, 2025ನೇ ಸಾಲಿನಲ್ಲಿ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕ ಆಗಿದ್ದೇನೆ, ಬಹಳ ಸಂತಸವಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ವಿವಿ ಕುಲಸಚಿವ ರುದ್ರೇಶ ಅವರ ಪ್ರೋತ್ಸಾಹದ ಮೇರೆಗೆ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಅರೆಕಾಲಿಕ ಪ್ರಾಧ್ಯಪಕಿ ಹುದ್ದೆಗೆ ಅರ್ಜಿ ಸಲ್ಲಿಸಿ ನೇಮಕಗೊಂಡಿದ್ದಾರೆ. ವಿಎಸ್ಕೆವಿವಿಯು ನೇಮಕಾತಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೆ ಶೇ 1ರಷ್ಟು ಮೀಸಲಾತಿ ನೀಡಿದ್ದು, ಇದರ ಅನ್ವಯ ರೇಣುಕಾ ಪೂಜಾರಿ ಆಯ್ಕೆಯಾಗಿದ್ದಾರೆ.