ತಮ್ಮ ಜೀವನದಲ್ಲಿ ಯಶಸ್ಸನ್ನು (Success Life) ಬಯಸದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರೂ ಯಶಸ್ಸು ಪಡೆಯಲೆಂದೇ ಹಗಲಿರುಳು ಶ್ರಮಿಸುತ್ತಾರೆ ಹಾಗೂ ಕಷ್ಟಪಡುತ್ತಾರೆ. ಇನ್ನು ಯಶಸ್ಸು ದೊರೆಯಲು ಅದೃಷ್ಟವಿದ್ದರೆ ಸಾಲದು ಜೊತೆಗೆ ಪರಿಶ್ರಮ ಕೂಡ ಇರಬೇಕು ಎನ್ನುತ್ತಾರೆ. ಅದೃಷ್ಟ (Lucky) ಹಾಗೂ ಕಷ್ಟಪಟ್ಟು ದುಡಿಯುವ ಛಲ ನಮ್ಮದಾಗಿದ್ದರೆ ಮಾತ್ರ ನಾವು ಮಾಡುವ ಕೆಲಸದಲ್ಲಿ ಯಶಸ್ಸು ದೊರೆಯುವುದು ನೂರಕ್ಕೆ ನೂರು ಸತ್ಯ. ಒಮ್ಮೊಮ್ಮೆ ಜಯ, ಗೆಲುವು ಎಂಬುದು ಅದೃಷ್ಟವನ್ನು ಆಧರಿಸಿಕೊಂಡಿರುತ್ತದೆ ಎಂಬ ಮಾತೂ ಸುಳ್ಳು. ಏಕೆಂದರೆ ನಾವು ಮಾಡುವ ಕೆಲಸದಲ್ಲಿ ಶ್ರಮ ಹಾಕಿದರೆ ಕಷ್ಟಪಟ್ಟು ದುಡಿದರೆ ನಮಗೆ ಅದೃಷ್ಟವಿಲ್ಲದಿದ್ದರೂ ನಾವು ಯಶಸ್ಸಿನ ಬೆನ್ನೇರುವುದು ನಿಜವಾಗಿದೆ.
ಅನಾದಿ ಕಾಲದಿಂದಲೂ ವ್ಯಕ್ತಿಯ ಗುಣ, ಸ್ವಭಾವ, ಸೋಲು ಗೆಲುವುಗಳನ್ನು ಅಂದಾಜಿಸುವ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೂಡ ಕೆಲವೊಂದು ರಾಶಿಗಳು ಯಶಸ್ಸು ಹೊಂದುವ ಗುಣ ಸ್ವಭಾವಗಳನ್ನು ಹೊಂದಿರುತ್ತದೆ ಎಂದು ತಿಳಿಸಿದೆ.
ಈ ರಾಶಿಯವರು ಹೇಗೆಂದರೆ ಕ್ಷಣಮಾತ್ರದಲ್ಲಿ ಅವರಿಗೆ ಜಯ ದೊರಕಿಬಿಡುತ್ತದೆ. ಹಾಗೆಂದು ಅವರು ಶ್ರಮಪಡದೇ ಇದ್ದರೆ ಈ ಯಶಸ್ಸು ಸೋಲಾಗಿ ಕೂಡ ಮಾರ್ಪಡುತ್ತದೆ ಎಂಬ ಎಚ್ಚರಿಕೆಯನ್ನು ಸೂಚಿಸಲಾಗಿದೆ. ಹಾಗಿದ್ದರೆ ಆ ರಾಶಿಗಳಾವುವು ಅವರ ಸ್ವಭಾವವೇನು ಎಂಬುದನ್ನು ತಿಳಿದುಕೊಳ್ಳೋಣ.
ಮಕರ ರಾಶಿ
ಶನಿ ಈ ರಾಶಿಯ ಅಧಿಪತಿಯಾಗಿದ್ದು ಇವರು ಹೆಚ್ಚು ಮಹತ್ವಾಕಾಂಕ್ಷಿಗಳು ಹಾಗೂ ಶಿಸ್ತಿನವರಾಗಿರುತ್ತಾರೆ. ಉದ್ದೇಶಕ್ಕೆ ಸರಿಯಾಗಿ ಕೆಲಸ ಮಾಡುವ ಈ ರಾಶಿಯವರು ನೈಜವಾಗಿರುತ್ತಾರೆ ಹಾಗೂ ಶ್ರಮ ಹಾಕಿ ಕೆಲಸದಲ್ಲಿ ಯಶಸ್ಸು ಪಡೆದುಕೊಳ್ಳಲು ಬಯಸುತ್ತಾರೆ.
ಇದರಿಂದ ಅವರಿಗೆ ಯಶಸ್ಸು ಎಂಬುದು ದೀರ್ಘ ಅವಧಿಯದ್ದಾಗಿರುತ್ತದೆ. ಮಕರ ರಾಶಿಯವರು ಯೋಜನೆ ಹಾಕಿಕೊಂಡು ಅದಕ್ಕಾಗಿ ದುಡಿಯುವ ಮನಸ್ಥಿತಿಯುಳ್ಳವರಾಗಿದ್ದಾರೆ.
ಯಾವುದೇ ಅಡೆತಡೆ ಅವರ ಮುಂದೆ ಬರಲಿ ಅದನ್ನು ನಿಭಾಯಿಸಿಕೊಂಡೇ ಮುನ್ನಡೆಯುತ್ತಾರೆ. ತಾಳ್ಮೆ ಹಾಗೂ ಲೆಕ್ಕಾಚಾರದ ಸ್ವಭಾವ ಯಶಸ್ಸಿನತ್ತ ಮುನ್ನುಗ್ಗುವತ್ತ ಮಾಡುತ್ತದೆ.
ವ್ಯವಹಾರ, ಶಿಕ್ಷಣ, ವೈಯಕ್ತಿಕ ಆಸಕ್ತಿ ಹೀಗೆ ಯಾವುದೇ ಕ್ಷೇತ್ರವಿರಲಿ ತಮ್ಮ ಗುರಿ ಸಾಧನೆಯೊಂದನ್ನೇ ಮುಖ್ಯವಾಗಿಸಿಕೊಳ್ಳುತ್ತಾರೆ.
ಗುರಿಯನ್ನಿಟ್ಟುಕೊಂಡು ಅದಕ್ಕಾಗಿ ಪರಿಶ್ರಮಿಸುವ ಈ ರಾಶಿಯವರು, ಗೆಲುವು ನಿರಾಯಾಸವಾಗಿ ದೊರೆತರೂ ಶ್ರಮವಹಿಸಿಯೇ ಪಡೆಯುತ್ತೇನೆಂಬ ವಿಶಿಷ್ಟ ಸ್ವಭಾವದವರಾಗಿದ್ದಾರೆ.
ಸಿಂಹ ರಾಶಿ
ಸೂರ್ಯ ಈ ರಾಶಿಯ ಗ್ರಹಾಧಿಪತಿಯಾಗಿದ್ದು ಹುಟ್ಟುತ್ತಲೇ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ ಎಂದೇ ಹೇಳಲಾಗುತ್ತದೆ.
ತಮ್ಮ ಸುತ್ತಲಿನವರ ಮೇಲೆ ಗಾಢ ಪ್ರಭಾವ ಬೀರುವ ಸಿಂಹ ರಾಶಿಯವರು ಹೆಚ್ಚಿನ ಮಹತ್ವಾಕಾಂಕ್ಷೆ, ಆಕರ್ಷಕ ನೋಟ, ನೈಜ ಸ್ವರೂಪದಿಂದ ಮನಗೆಲ್ಲುತ್ತಾರೆ.
ವೃತ್ತಿ ಕ್ಷೇತ್ರದಲ್ಲೂ ಈ ರಾಶಿಯವರು ವಿಶಿಷ್ಟವಾಗಿ ಎದ್ದುಗಾಣುತ್ತಾರೆ. ತಮಗೆ ಒದಗಿ ಬರುವ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡು ಇವರು ಯಶಸ್ಸಿನ ದಾರಿಯತ್ತ ಮುನ್ನುಗ್ಗುತ್ತಾರೆ. ತಮ್ಮೊಂದಿಗೆ ಇತರರ ಪ್ರಗತಿಗೂ ಮಹತ್ವ ನೀಡುವ ಸಿಂಹ ರಾಶಿಯವರು, ಸಹೋದ್ಯೋಗಿಗಳ ಯಶಸ್ಸನ್ನು ಸಂಭ್ರಮಿಸುತ್ತಾರೆ.