ಎಲ್ಲರೂ ಪ್ರವಾಸ ಹೋಗುವ ಪ್ಲ್ಯಾನ್ ಹಾಕಿಕೊಳ್ಳುತ್ತಾರೆ. ಹೆಚ್ಚಿನವರಿಗೂ ವಾರಾಂತ್ಯದ ರಜೆಗಳು (Week End Leaves) ದೊರೆಯುವುದರಿಂದ ಮಕ್ಕಳಿಗೂ ಕ್ರಿಸ್ಮಸ್ ರಜಾಕಾಲವಾಗಿರುವುದರಿಂದ ವಿದೇಶಕ್ಕೆ ಪ್ರಯಾಣಗೈಯ್ಯುವ ಯೋಜನೆ ಇರುತ್ತದೆ. ಹೆಚ್ಚಿನ ಪೋಷಕರು ಮಕ್ಕಳು ಇಷ್ಟಪಡುವ ಅವರಿಗೆ ಖುಷಿ ನೀಡುವ ದೇಶಗಳನ್ನೇ ಪ್ರವಾಸಕ್ಕೆ ಆಯ್ಕೆಮಾಡುತ್ತಾರೆ.
ಮಾಸ್ಕೋ ಅತ್ಯುತ್ತಮ ಹಾಲಿಡೇ ಡೆಸ್ಟಿನೇಶನ್
ಇಂತಹ ಪಟ್ಟಿಯಲ್ಲಿ ರಷ್ಯಾದ ರಾಜಧಾನಿ ಮಾಸ್ಕೋ ಉನ್ನತ ಸ್ಥಾನದಲ್ಲಿದೆ. ಶ್ರೀಮಂತ ಇತಿಹಾಸ, ಸಾಂಸ್ಕೃತಿಕ ಸಂಪತ್ತು, ಸಂವಾದಾತ್ಮಕ ವಸ್ತುಸಂಗ್ರಹಾಲಯಗಳು, ಆಧುನಿಕ ಸೌಕರ್ಯಗಳು ಮತ್ತು ರೋಮಾಂಚಕ ಪ್ರದೇಶಗಳಿಂದ ಕಣ್ಸಳೆಯುವ ಮಾಸ್ಕೋ ಒಂದು ಅದ್ಭುತ ಹಾಲಿಡೇ ಡೆಸ್ಟಿನೇಶನ್ ಎಂದು ಹೇಳುವುದರಲ್ಲಿ ತಪ್ಪಿಲ್ಲ. ಮಾಸ್ಕೋಗೆ ಪ್ರವಾಸ ಮಾಡುವ ಪ್ಲ್ಯಾನ್ ನಿಮ್ಮದಾಗಿದ್ದರೆ ಇಂದಿನ ಲೇಖನದಲ್ಲಿ ಎಲ್ಲೆಗೆಲ್ಲಾ ಹೋಗಬಹುದು ನಿಮ್ಮ ಪ್ರವಾಸವನ್ನು ಹೇಗೆ ಪ್ಲ್ಯಾನ್ ಮಾಡಬಹುದೆಂಬ ಮಾರ್ಗದರ್ಶನವನ್ನು ನೀಡುತ್ತಿದ್ದೇವೆ.
VDNH (ರಾಷ್ಟ್ರೀಯ ಆರ್ಥಿಕತೆಯ ಸಾಧನೆಗಳ ಪ್ರದರ್ಶನ) ಒಂದು ವಿಸ್ತಾರವಾದ ವಸ್ತುಸಂಗ್ರಹಾಲಯ ಮತ್ತು ಪ್ರದರ್ಶನ ಸಂಕೀರ್ಣವಾಗಿ ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತದೆ, ಈ ತಾಣ ಮಕ್ಕಳು ಮತ್ತು ವಯಸ್ಕರಿಗೆ ಶೈಕ್ಷಣಿಕ ಮತ್ತು ಮನರಂಜನೆಯ ಚಟುವಟಿಕೆಗಳ ಸಮ್ಮಿಶ್ರಣವನ್ನೊದಗಿಸುತ್ತದೆ.
ಈ ಪ್ರದೇಶ ವೀಕ್ಷಣೆಗೆ ಚಳಿಗಾಲ ಸೂಕ್ತವಾಗಿದೆ. ಇಲ್ಲಿ ಸ್ಕೇಟಿಂಗ್ ಕೂಡ ಮಾಡಬಹುದಾಗಿದ್ದು, ಸ್ಕೇಟಿಂಗ್ ಪರಿಕರಗಳನ್ನು ಬಾಡಿಗೆಗೆ ಪಡೆಯಬಹುದು. ಓರಿಯನ್ ಫ್ಯಾಮಿಲಿ ಥೀಮ್ ಪಾರ್ಕ್ ಮತ್ತು ಯುರೋಪ್‌ನ ಅತಿ ಎತ್ತರದ ಫೆರ್ರಿಸ್ ವೀಲ್, ಮಾಸ್ಕೋ ಸನ್, 140 ಮೀಟರ್ ಎತ್ತರದಿಂದ ನಗರದ ಆಕರ್ಷಕ ವಿಹಂಗಮ ನೋಟಗಳನ್ನು ಪ್ರವಾಸಿಗರಿಗೆ ನೀಡುತ್ತದೆ. 12,000 ಕ್ಕೂ ಹೆಚ್ಚು ಸಮುದ್ರ ಜೀವಿಗಳಿಗೆ ನೆಲೆಯಾಗಿರುವ ಮಾಸ್ಕ್ವೇರಿಯಮ್ ಕೂಡ ಇಲ್ಲಿದೆ.