ಪುರುಷರ ಮೇಲೆ ದಬ್ಬಾಳಿಕೆ ದೌರ್ಜನ್ಯ ಅತಿಯಾಗುತ್ತಿದೆ ಎಂಬ ಕೂಗು ಇದೀಗ ಎಲ್ಲೆಡೆ ಕೇಳಿ ಬರುತ್ತಿದ್ದು, ಮೆನ್ ಟು ಡಿಬೆಟ್, ಜಸ್ಟೀಸ್ ಫಾರ್ ಅತುಲ್ ಸುಭಾಷ್ (Atul Subhash), ಪುರುಷರಿಗಾಗಿ ರಾಷ್ಟ್ರೀಯ ಆಯೋಗ, ಪುರುಷರು ಎಟಿಎಮ್ಗಳಲ್ಲ ಎಂಬ ಹ್ಯಾಶ್ಟ್ಯಾಗ್ಗಳು ಕೂಡ ಹಲವು ತಿಂಗಳುಗಳಿಂದ ಸಾಮಾಜಿಕ ತಾಣದಲ್ಲಿ (Social Media) ಟ್ರೆಂಡ್ ಆಗುತ್ತಿವೆ. ಎಐ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ (Suicide), ದೆಹಲಿಯ ಕೆಫೆ ಮಾಲೀಕರಾದ ಪುನೀತ್ ಖುರಾನಾ (Punith Kurana) ಹೊಸ ವರ್ಷದಂದೇ ಸಂಜೆ ಆತ್ಮಹತ್ಯೆ ಮಾಡಿಕೊಂಡ ನಂತರ ಪುರುಷರ ಮೇಲೆ ದಬ್ಬಾಳಿಕೆ ನಿಲ್ಲಿಸಿ ಎಂಬ ಕೂಗು ಹೆಚ್ಚಾಗುತ್ತಿದೆ.
ಮಾನಸಿಕ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪುರುಷರು
ಈ ಎರಡೂ ಪ್ರಕರಣಗಳಲ್ಲಿ ಜೀವ ಕಳೆದುಕೊಂಡವರು ತಮ್ಮ ಪತ್ನಿ ಹಾಗೂ ಅವರ ಮನೆಯವರ ದಬ್ಬಾಳಿಕೆ ಹಾಗೂ ಮಾನಸಿಕ ಕಿರುಕುಳ ಹಾಗೂ ತೀವ್ರ ಚಿತ್ರಹಿಂಸೆ ನೀಡಿದ್ದಾರೆ ಎಂದು ಆಪಾದಿಸಿದ್ದಾರೆ. ಹಾಗೂ ಇದರಿಂದಲೇ ತಾವು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ತಮ್ಮ ಡೆತ್ ನೋಟ್ನಲ್ಲಿ ಬರೆದುಕೊಂಡಿದ್ದಾರೆ.
ಪುರುಷರ ಹಕ್ಕುಗಳ ಜೊತೆಗೆ ಪುರುಷರ ಮೇಲೆ ನಡೆಯುತ್ತಿರುವ ಕ್ರೌರ್ಯವನ್ನು ಈ ಘಟನೆಗಳು ಬಿಂಬಿಸಿವೆ. ಪುರುಷ ಹಕ್ಕುಗಳ ಕಾರ್ಯಕರ್ತರು ಪ್ರತಿಪಾದಿಸುತ್ತಿರುವಂತೆ ಭಾರತದ ಕಾನೂನುಗಳು ಲಿಂಗ-ಪಕ್ಷಪಾತವಾಗಿದೆಯೇ ಎಂಬ ಚರ್ಚೆ ಕೂಡ ಉಂಟಾಗಿದೆ. ಪುರುಷರಿಗಾಗಿ ರಾಷ್ಟ್ರೀಯ ಆಯೋಗ ರಚನೆಯ ಬೇಡಿಕೆಗಳೊಂದಿಗೆ ಈ ಕಾನೂನುಗಳನ್ನು ಲಿಂಗ ತಟಸ್ಥಗೊಳಿಸುವ ಮನವಿಯೂ ಇದೆ.
ಈ ಇಬ್ಬರೂ ಪುರುಷರು ಆತ್ಮಹತ್ಯೆ ಮಾಡಿಕೊಂಡು ತಮ್ಮ ಜೀವ ಕಳೆದುಕೊಂಡಿದ್ದಾರೆ. ತಮ್ಮವರಿಂದಲೇ ನೊಂದಿರುವ ಈ ಪುರುಷರು ಮಾನಸಿಕವಾಗಿ ದೈಹಿಕವಾಗಿ ಬಳಲಿದ್ದಾರೆ ಎಂಬುದು ಸೂಚಿಸುತ್ತಿದ್ದು ಭಾರತದಲ್ಲಿ ಪುರುಷರ ಆತ್ಮಹತ್ಯೆಗಳು ಮಹಿಳೆಯರಿಗಿಂತ ಹೆಚ್ಚಿನ ಪ್ರಮಾಣದಲ್ಲಿವೆ ಎಂದು ಅನೇಕರು ಉಲ್ಲೇಖಿಸುತ್ತಿದ್ದಾರೆ.
ಪುರುಷರು ಅನುಭವಿಸುತ್ತಿರುವ ಮಾನಸಿಕ ಸಂಕಟಗಳು
ಎಕ್ಸ್ ಹಾಗೂ ಲಿಂಕ್ಡ್ ಇನ್ನಂತಹ ಸಾಮಾಜಿಕ ತಾಣದಲ್ಲಿ ಪುರುಷರು ತಾವು ಅನುಭವಿಸುತ್ತಿರುವ ದುರಂತಗಳ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಮಹಿಳೆಯ ಪರವಾಗಿಯೇ ದನಿ ಎತ್ತುತ್ತಿರುವ ಕಾರಣ ಪುರುಷರ ನೋವನ್ನು ಯಾರೂ ಕೇಳುತ್ತಿಲ್ಲ ಎಂಬ ಮಾತೂ ಕೇಳಿ ಬರುತ್ತಿದೆ.