ಬಸ್ ಟಿಕೆಟ್ ದರ (Bus Ticket Rate) ಏರಿಕೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರಿಗೆ ವಿಪಕ್ಷ ನಾಯಕ ಆರ್ ಅಶೋಕ್ (R Ashok) ಅವರು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಆರೋಪಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆರ್ ಅಶೋಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಫಿಂಗ್ (Morphing) ಮಾಡಿರುವ ವಿಡಿಯೋ ಶೇರ್ ಮಾಡಿ ಮಾನ ಹಾನಿ ಮಾಡಿದ್ದಾರೆ. ಹಾಗಾಗಿ ಅಂಥವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಪೊಲೀಸ್ ಆಯುಕ್ತರಿಗೆ ಆರ್ ಅಶೋಕ್ ಪತ್ರ
ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಆರ್. ಅಶೋಕ್ ಅವರು, ಡಿಕೆ ಶಿವಕುಮಾರ್ ಸೇರಿ ಕಾಂಗ್ರೆಸ್ ನಾಯಕರ ಮೇಲೆ FIR ದಾಖಲಿಸಿವಂತೆ ಮನವಿ ಮಾಡಿದ್ದಾರೆ. ಮಾರ್ಫಿಂಗ್ ಮಾಡಿರುವ ವಿಡಿಯೋ ಪೋಸ್ಟ್ ಮಾಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಜನವರಿ 3 ರಂದು ಪೋಸ್ಟ್ ಮಾಡಿದ್ದ ಕಾಂಗ್ರೆಸ್
ಜನವರಿ 3ರಂದು ಸಾಮಾಜಿಕ ಜಾಲತಾಣ X ನಲ್ಲಿ ಆರ್ ಅಶೋಕ್ ವಿಡಿಯೋವನ್ನು ಕಾಂಗ್ರೆಸ್ ಪೋಸ್ಟ್ ಮಾಡಿತ್ತು. ಕಾಂಗ್ರೆಸ್ ಪಕ್ಷದ ಅಧಿಕೃತ ಖಾತೆಯಿಂದ ವಿಡಿಯೋ ಪೊಸ್ಟ್ ಮಾಡಲಾಗಿತ್ತು, ಪೊಲೀಸ್ ಅಧಿಕಾರಿಗೆ ಆರ್.ಅಶೋಕ್ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿತ್ತು. ಅವಾಚ್ಯ ಶಬ್ಧ ಬಳಕೆ ಮಾಡಿದ್ದಾರೆ ಎಂದು ವಿಡಿಯೋ ಒಂದನ್ನು ಕಾಂಗ್ರೆಸ್ ಅಪ್ಲೋಡ್ ಮಾಡಿತ್ತು.
ಡಿಕೆಶಿ ಸೇರಿ 6 ಜನರ ವಿರುದ್ಧ ದೂರು ದಾಖಲಿಸುವಂತೆ ಮನವಿ
ಕಾಂಗ್ರೆಸ್ ಮಾರ್ಫಿಂಗ್ ಮಾಡಿ ವಿಡಿಯೋ ಪೋಸ್ಟ್ ಮಾಡಿದೆ ಎಂದು ಆರ್.ಅಶೋಕ್ ಆರೋಪಿಸಿದರು. ನಾನು ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದಿಸಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಸಲಿ ವಿಡಿಯೋ ಹಾಗೂ ಕಾಂಗ್ರೆಸ್ ಪೋಸ್ಟ್ ಮಾಡಿರುವ ವಿಡಿಯೋ ಲಿಂಕ್ ಕೂಡ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಜವಾಬ್ದಾರಿ ಇರುವ 6 ಜನರ ಮೇಲೆ FIR ದಾಖಲಿಸುವಂತೆ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ ಡಿಕೆಶಿವಕುಮಾರ್, ಐಶ್ವರ್ಯ ಮಹಾದೇವ್, ರಮೇಶ್ ಬಾಬು, ಇ ಸತ್ಯಪ್ರಕಾಶ್, ವಿಜಯ್ ಮತ್ತಿಕಟ್ಟಿ , ನಿಕೇತ್ ರಾಜ್ ಮೌರ್ಯ ಮೇಲೆ FIR ದಾಖಲಿಸುವಂತೆ ಮನವಿ ಮಾಡಿದ್ದಾರೆ.