ಟ್ರೆಂಡ್

ಟ್ರೆಂಡ್‌ ಆಗ್ತಿದೆ ಲಿವಿಂಗ್‌ ಅಪಾರ್ಟ್‌ ಟುಗೆದರ್‌; ಭಾರತದಲ್ಲಿ ಹಿಟ್ ಆಗುತ್ತಾ ಈ ಪ್ರವೃತ್ತಿ?

living apart trend started

ಲಿವ್‌ ಇನ್‌ ಟುಗೆದರ್‌ (Live In Together) ಕಲ್ಪನೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ, ಆದರೆ ಈಗ ಟ್ರೆಂಡ್‌ (Trend) ಆಗ್ತಿರೋದು ಲಿವಿಂಗ್ ಅಪಾರ್ಟ್ ಟುಗೆದರ್ (Living Apart Together). ಹೌದು, ಪಾಶ್ಚಿಮಾತ್ಯ (Western) ದೇಶಗಳಲ್ಲಿ ಮದುವೆಯಾದವರಲ್ಲಿ ಈ ಒಂದು ಪ್ರವೃತ್ತಿ ಹೆಚ್ಚಾಗ್ತಿದೆ. ವಿವಾಹವಾಗಿ ಒಂದೇ ಮನೆಯಲ್ಲಿದ್ದುಕೊಂಡು ಸಣ್ಣ ಪುಟ್ಟ ಜಗಳ, ಗೊಂದಲ ಮಾಡಿಕೊಂಡು ಒಟ್ಟಿಗೆ ಇರೋದಕ್ಕಿಂತ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಾ ಪರಸ್ಪರ ಖುಷಿಯಾಗಿರೋದು ಲಿವಿಂಗ್ ಅಪಾರ್ಟ್ ಟುಗೆದರ್‌ನ ಪರಿಕಲ್ಪನೆ. ಜಗಳ, ವೈಮನಸ್ಸು ಇದೆಲ್ಲಾ ಇರುತ್ತದೆ, ಆದರೆ ಡಿವೋರ್ಸ್‌ ತೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುವವರು ಅಥವಾ ಉದ್ಯೋಗದ ನಿಮಿತ್ತ ದೂರದ ಊರಿನಲ್ಲಿ ಇರುವವರು, ಸ್ವಯಂ ಕಾಳಜಿ ಬಯಸುವವರು ಇಂಥಹವರು ಇದನ್ನಅನುಸರಿಸುತ್ತಿದ್ದಾರೆ.

ಪ್ರತಿದಿನ ಸಣ್ಣ ವಿಚಾರಗಳಿಗೆ ಮನಸ್ತಾಪ ಮಾಡಿಕೊಳ್ಳುವ ಬದಲು ದೂರ ದೂರ ಇದ್ದುಕೊಂಡೆ ಖುಷಿಯಾಗಿರಬೇಕು ಎಂದು ಬಯಸುವ ದಂಪತಿಗಳು ಈ ಟ್ರೆಂಡ್‌ ಅನ್ನು ಅನುಸರಿಸುತ್ತಿದ್ದಾರೆ. ಅಂತಹ ದಂಪತಿಗಳು ಒಂದೇ ಕಟ್ಟಡದಲ್ಲಿ, ಅದೇ ಹೌಸಿಂಗ್ ಸೊಸೈಟಿಯಲ್ಲಿ ಅಥವಾ ವಿವಿಧ ನಗರಗಳಲ್ಲಿ ವಾಸಿಸಬಹುದು. ಮದುವೆ ಆದಮೇಲೆ ಒಟ್ಟಿಗೆ ಇರದೋ ರೂಢಿ, ಆದರೆ ಈ ಪ್ರವೃತ್ತಿ ದಂಪತಿಗಳ ನಡುವೆ ಅಂತರ ಕಾಯ್ದುಕೊಳ್ಳುವುದನ್ನು ಸೂಚಿಸುತ್ತದೆ. ಅದಾಗ್ಯೂ ವಾರಕ್ಕೊಮ್ಮೆ ಭೇಟಿ, ಹೊರಗಡೆ ಹೋಗುವುದು, ವಿಡಿಯೋ ಕಾಲ್‌, ಒಟ್ಟಿಗೆ ಸಮಯ ಕಳೆಯುವುದು ಇದೆಲ್ಲಾ ಈ ಪರಿಕಲ್ಪನೆಯ ಭಾಗವಾಗಿರುತ್ತದೆ.

ಕೆಲವು ದಂಪತಿಗಳಿಗೆ ಇದು ಸಹಕಾರಿ

ಈ ಪ್ರವೃತ್ತಿಯು ದಂಪತಿಗಳು ತಮ್ಮ ಬಂಧವನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಸಹಬಾಳ್ವೆಯಿಂದ ಆಗಾಗ್ಗೆ ಉದ್ಭವಿಸುವ ಘರ್ಷಣೆಗಳನ್ನು ತಪ್ಪಿಸುತ್ತದೆ. ತಮ್ಮ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಲು, ದೈನಂದಿನ ಗಲಾಟೆ ಕಡಿಮೆ ಮಾಡಲು ಮತ್ತು ಪ್ರಣಯವನ್ನು ಜೀವಂತವಾಗಿಡಲು ಬಯಸುವ ಕೆಲವರಿಗೆ ಇದು ನಿಜವಾಗಿಯೂ ಸಹಕಾರಿಯಾಗಿದೆ. “ವೈಯಕ್ತಿಕ ಸ್ಥಳ, ಸ್ವಾತಂತ್ರ್ಯ ಮತ್ತು ಗೌಪ್ಯತೆಯನ್ನು ಗೌರವಿಸುವ ಆಧುನಿಕ ದಂಪತಿಗಳು ಈ ವ್ಯವಸ್ಥೆಯಿಂದ ಪ್ರಯೋಜನ ಪಡೆಯುತ್ತಾರೆ. ಇದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ವೈಯಕ್ತಿಕತೆಯನ್ನು ಕಾಪಾಡಿಕೊಂಡು ತನ್ನದೇ ಆದ ಜೀವನಶೈಲಿಯನ್ನು ಕಾಪಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ” ಎಂದು ದೆಹಲಿ ಮೂಲದ ಮನಶ್ಶಾಸ್ತ್ರಜ್ಞ ಮತ್ತು ವಿವಾಹ ಸಲಹೆಗಾರರಾದ ಡಾ. ನಿಶಾ ಖನ್ನಾ ಹೇಳುತ್ತಾರೆ.