ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿಗೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ದುಬಾರಿ ಉಡುಗೊರೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಕುಟುಂಬಕ್ಕೆ 2023ರಲ್ಲಿ ವಿದೇಶಿ ನಾಯಕರಿಂದ ಹತ್ತಾರು ಸಾವಿರ ಡಾಲರ್ ಮೌಲ್ಯದ ಗಿಫ್ಟ್ಗಳು ಉಡುಗೊರೆಯಾಗಿ ಬಂದಿವೆ. ಆ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಸುಮಾರು 20,000 ಡಾಲರ್ ಮೌಲ್ಯದ ವಜ್ರವನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು 2023 ರಲ್ಲಿ ಅಮೆರಿಕದ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ 17 ಲಕ್ಷ ರೂಪಾಯಿ ಮೌಲ್ಯದ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು. ಸುದ್ದಿ ಸಂಸ್ಥೆ ಎಪಿ ವರದಿಯ ಪ್ರಕಾರ, ಪ್ರಧಾನಿ ಮೋದಿಯವರ ಈ ಉಡುಗೊರೆ ಜಿಲ್ ಬೈಡನ್ ಅವರು 2023 ರಲ್ಲಿ ವಿದೇಶಿ ನಾಯಕರಿಂದ ಪಡೆದ ಅತ್ಯಂತ ದುಬಾರಿ ಉಡುಗೊರೆಯಾಗಿದೆ ಎನ್ನಲಾಗಿದೆ. ಅಂದಹಾಗೆ ಮೋದಿ ನೀಡಿರುವ ಈ ಉಡುಗೊರೆಯ ಮೌಲ್ಯ 20 ಸಾವಿರ ಡಾಲರ್ ಅಂದರೆ 17 ಲಕ್ಷ ರೂಪಾಯಿಗಳು.
ಪಿಎಂ ನರೇಂದ್ರ ಮೋದಿ ನೀಡಿದ 7.5 ಕ್ಯಾರೆಟ್ ವಜ್ರವು 2023 ರಲ್ಲಿ ಜೋ ಬೈಡನ್ ಅವರ ಕುಟುಂಬದ ಸದಸ್ಯರು ಪಡೆದ ಅತ್ಯಂತ ದುಬಾರಿ ಉಡುಗೊರೆಯಾಗಿದೆ. ಸ್ಟೇಟ್ ಡಿಪಾರ್ಟ್ಮೆಂಟ್ನ ವಾರ್ಷಿಕ ಲೆಕ್ಕಪತ್ರದ ವರದಿಯ ಪ್ರಕಾರ, ಯುನೈಟೆಡ್ ಸ್ಟೇಟ್ಸ್ನಲ್ಲಿರುವ ಉಕ್ರೇನಿಯನ್ ರಾಯಭಾರಿಯು US$14,063 ಮೌಲ್ಯದ ಬ್ರೂಚ್ ಮತ್ತು ಬ್ರೇಸ್ಲೆಟ್ ಅನ್ನು ಜೋ ಬೈಡನ್ ಮತ್ತು ಅವರ ಕುಟುಂಬಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಈಜಿಪ್ಟ್ ಅಧ್ಯಕ್ಷ ಮತ್ತು ಪ್ರಥಮ ಮಹಿಳೆ US$4,510 ಮೌಲ್ಯದ ಬ್ರೂಚ್ ಮತ್ತು ಫೋಟೋ ಆಲ್ಬಮ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಬೈಡನ್ ಕುಟುಂಬವು ಸ್ವೀಕರಿಸಿದ ಉಡುಗೊರೆಗಳನ್ನು ಎಲ್ಲಿ ಇರಿಸಲಾಗಿದೆ?
ಸ್ಟೇಟ್ ಡಿಪಾರ್ಟ್ಮೆಂಟ್ ಪ್ರಕಾರ, US $ 20,000 ಮೌಲ್ಯದ ವಜ್ರವನ್ನು ಅಧಿಕೃತ ಉದ್ದೇಶಗಳಿಗಾಗಿ ವೈಟ್ ಹೌಸ್ ಈಸ್ಟ್ ವಿಂಗ್ನಲ್ಲಿ ಇರಿಸಲಾಗಿದೆ. ಜೋ ಬೈಡನ್ ಮತ್ತು ಜಿಲ್ ಬೈಡನ್ ಸ್ವೀಕರಿಸಿದ ಇತರ ಉಡುಗೊರೆಗಳನ್ನು ಆರ್ಕೈವ್ಗೆ ಕಳುಹಿಸಲಾಗಿದೆ.
ಯಾವ್ಯಾವ ನಾಯಕರಿಂದ ದುಬಾರಿ ಉಡುಗೊರೆ ಸ್ವೀಕಾರ?
ಜೋ ಬೈಡನ್ ಮತ್ತು ಜಿಲ್ ಬೈಡನ್ ಅವರ ಉಡುಗೊರೆಗಳ ಬಗ್ಗೆ ನೋಡೋದಾದ್ರೆ, ಅವರು ಇನ್ನೂ ಅನೇಕ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ. ದಕ್ಷಿಣ ಕೊರಿಯಾದ ಅಧ್ಯಕ್ಷ ಯುನ್ ಸುಕ್-ಯೋಲ್ ಅವರಿಂದ US $ 7,100 ಮೌಲ್ಯದ ಫೋಟೋ ಆಲ್ಬಮ್ ಅನ್ನು ಸ್ವೀಕರಿಸಲಾಗಿದೆ, US $ 3,495 ಮೌಲ್ಯದ ಮಂಗೋಲಿಯನ್ ಯೋಧರ ಪ್ರತಿಮೆಯನ್ನು ಮಂಗೋಲಿಯನ್ PM ಉಡುಗೊರೆಯಾಗಿ ಸ್ವೀಕರಿಸಲಾಗಿದೆ. ಇದಲ್ಲದೇ ಬ್ರೂನಿ ಸುಲ್ತಾನ್ 3000 ಅಮೆರಿಕನ್ ಡಾಲರ್ ಮೌಲ್ಯದ ಬೆಳ್ಳಿಯ ಬಟ್ಟಲನ್ನು ನೀಡಿದರೆ, ಇಸ್ರೇಲ್ ಅಧ್ಯಕ್ಷರು 3160 ಅಮೆರಿಕನ್ ಡಾಲರ್ ಮೌಲ್ಯದ ಬೆಳ್ಳಿ ತಟ್ಟೆ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ 2400 ಅಮೆರಿಕನ್ ಡಾಲರ್ ಉಡುಗೊರೆ ನೀಡಿದ್ದಾರೆ.